ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರದಿಂದ ಅಕ್ಟೋಬರ್ 4 ರವರೆಗೆ ಕರ್ನಾಟಕದ ಪ್ರತ್ಯೇಕ ಭಾಗಗಳಲ್ಲಿ ವ್ಯಾಪಕವಾದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ ಕೆಲವು ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ 64.5 ಮಿ.ಮೀ ನಿಂದ 100 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.
ಕಳೆದ 24 ಗಂಟೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಿ ಗೌರಿಬಿದನೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 76 ಮಿಮೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ 72.5ಮಿಮೀ, ಬೀದರ್‌ನಲ್ಲಿ 63ಮಿಮೀ ಮಳೆಯಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆ ಮುಂದುವರಿದಿದೆ. ಮಂಗಳವಾರ, ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 15 ರವರೆಗೆ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಕಳೆದ ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತಗೊಂಡು ಸಂಚಾರ ದಟ್ಟಣೆ ಉಂಟಾಗಿತ್ತು. ಚಾಮರಾಜಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ಗಾಂಧಿಬಜಾರ್, ಶ್ರೀರಾಂಪುರ ಸೇರಿದಂತೆ ನಗರದ ಹಲವೆಡೆ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಚತುರ್ಥಿಯಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಭಕ್ತರು ಪರದಾಡುವಂತಾಗಿತ್ತು. ಶ್ರೀರಾಂಪುರ ಬಳಿಯ ಅಂಡರ್‌ಪಾಸ್ ಜಲಾವೃತಗೊಂಡು ಪ್ರಯಾಣಿಕರು ಹೋಗಲು ಸಾಧ್ಯವಾಗುತ್ತಿರಲಿಲ್ಲ.
ವರ್ತೂರಿನ ಬಳಗೆರೆ ಬಳಿಯ ಕ್ರೋಮ್ ಸರ್ವಿಸ್ ರಸ್ತೆಯ ಕೆಳಸೇತುವೆ ಜಲಾವೃತವಾಗಿತ್ತು. ಆ ಮೂಲಕ ಹಾದುಹೋಗಲು ಯತ್ನಿಸಿದ ಕಾರೊಂದು ನೀರಿನಲ್ಲಿ ಸಿಲುಕಿಕೊಂಡಿದೆ. ಕ್ರೋಮಾ ಸರ್ವಿಸ್ ರಸ್ತೆಯನ್ನು ತಪ್ಪಿಸಿ, ಪರ್ಯಾಯವಾಗಿ ಪಾಣತ್ತೂರು ರಸ್ತೆಯನ್ನು ಬಳಸಲು ನಗರ ಸಂಚಾರ ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದರು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಆಗಾಗ ಜಿಟಿ ಜಿಟಿ ಮಳೆ ಬಂದು ಹೋಗುತ್ತಿದೆ. ಇದರ ಹೊರತು ಎಲ್ಲಿಯೋ ಹೇಳಿಕೊಳ್ಳುವಂತಹ ಮಳೆ ದಾಖಲಾಗಿಲ್ಲ. ಆದರೆ ಸದ್ಯದ ಮುನ್ಸೂಚನೆ ನೋಡಿದರೆ ಮುಂದಿನ ಒಂದು ವಾರದಲ್ಲಿ ಎಲ್ಲೆಡೆ ಉತ್ತಮ ಮಳೆ ನಿರೀಕ್ಷೆ ಇದೆ.
ಸೆಪ್ಟಂಬರ್ 27ರಂದು ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಭಾರಿ ಮಳೆ ಬರಲಿರುವ ಪ್ರಯುಕ್ತ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಇತ್ತ ಸೆಪ್ಟಂಬರ್ 29ರಿಂದ ಅಕ್ಟೋಬರ್ 01ರವರೆಗೆ ಕರಾವಳಿ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹಾಗೂ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಕೊಡಗು, ಮಂಡ್ಯ ಮೈಸೂರು ಜಿಲ್ಲೆಗಳಿಗೆ ಎರಡು ದಿನ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.